ಹಣ್ಣು ಬಂದಿದೆ ಕೊಳ್ಳಿರೋ
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಹಣ್ಣು ಬಂದಿದೆ ಕೊಳ್ಳಿರೋ ||
ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯ
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಹಣ್ಣು ಬಂದಿದೆ ಕೊಳ್ಳಿರೋ ||ಪ||
ಹವ್ಯಕವ್ಯದ ಹಣ್ಣು, ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು|
ನವನೀತ ಚೋರನೆಂಬ ಜವನಾ ಅಂಜಿಪ ಹಣ್ಣು
ಅವನಿಯೊಳು ಶ್ರೀರಾಮನೆಂಬೊ ಹಣ್ಣು ||ಚೆನ್ನಬಾಲಕೃಷ್ಣ||
ಕೊಳೆತು ಹೋಗುವುದಲ್ಲ, ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ |
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು ||ಚೆನ್ನಬಾಲಕೃಷ್ಣ||
ಕೆಟ್ಟು ನಾರುವುದಲ್ಲ, ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ |
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು ||ಚೆನ್ನಬಾಲಕೃಷ್ಣ||
Comments
Post a Comment