ನೋಡ ನೋಡ
ನೋಡ ನೋಡ ,ನೋಡ ನೋಡ ||
ನೋಡ ನೋಡ ಗೋಪಾಲಕೃಷ್ಣ ಎಂಥ ಚೆಲುವ |
ನೋಡ ನೋಡ ಶ್ರೀ ಹರಿ ತಾನೆಂಥಾ ಚೆಲುವ ||ಪ ||
ನೋಡ ನೋಡ ರುಕ್ಮಿಣಿ ಪ್ರಿಯ ಎಂಥ ಚೆಲುವ ||ಅ ಪ||
ಕಾಲಲಂದಿಗೆ ಗೆಜ್ಜೆಯ ನೋಡು
ಮೇಲೆ ಪೈಝಣಿ ಸರಪಳಿ ನೋಡು |
ಉಂಗುಷ್ಟದಿಂದ ಗಂಗೆಯ ಪಡೆದ
ಮಂಗಳಾತ್ಮಕ ರಂಗನ ನೋಡು ||ನೋಡ ನೋಡ||
ವಜ್ರದ ಕಿರೀಟ ನೋಡು
ಕರ್ಣಕುಂಡಲ ನೋಡು |
ಚಿನ್ನದ ಕೊಳಲನೂದುವಂಥ
ಬಾಲ ಮುಖದ ರಂಗನ ನೋಡು ||ನೋಡ ನೋಡ||
ವಕ್ಷಸ್ಥಳದಲಿ ಲಕ್ಷ್ಮಿಯ ನೋಡು
ವೈಜಯಂತಿ ಮಾಲೆಯ ನೋಡು |
ನಾಭಿ ಕಮಲದಿ ಬ್ರಹ್ಮನ ಪಡೆದ
ನೀಲವರ್ಣ ಕೃಷ್ಣನ ನೋಡು||ನೋಡ ನೋಡ||
ಕಂದನ ಮೊರೆಯ ಕೇಳಿ
ಕಂಭದಿಂದ ಒಡೆದು ಬಂದು |
ಹಿರಣ್ಯಕನ ಉದರವ ಸೀಳಿ
ಕರುಳ ಮಾಲೆ ಧರಿಸಿದ ನೋಡು ||ನೋಡ ನೋಡ ||
ಕರಿರಾಜನ ಮೊರೆಯ ಕೇಳಿ
ಚಕ್ರದಿಂದ ನಕ್ರನ ಸೀಳಿ |
ಪುರಂದರ ವಿಠ್ಠಲನಾಗಿ
ಗಿರಿಯ ಮೇಲೆ ನಿಂತನು ನೋಡು ||ನೋಡ ನೋಡ||
Comments
Post a Comment