ಸಕಲ ಗ್ರಹಬಲ

 

ಸಕಲ ಗ್ರಹಬಲ ನೀನೆ ಸರಸಿಜಾಕ್ಷ
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೆ ||ಪ||

ರವಿ ಚಂದ್ರ ಬುಧ ನೀನೆ, ರಾಹು ಕೇತುವು ನೀನೆ
ಕವಿ ಗುರು ಶನಿಯು ಮಂಗಳನು ನೀನೆ |
ದಿವರಾತ್ರಿಯು ನೀನೆ, ನವ ವಿಧಾನವು ನೀನೆ
ಭವರೋಗಹರ ನೀನೆ ಭೇಷಜನು ನೀನೆ ||ಸಕಲ||

ಪಕ್ಷಮಾಸವು ನೀನೆ, ಪರ್ವಕಾಲವು ನೀನೆ
ನಕ್ಷತ್ರ ಯೋಗ ತಿಥಿ ಕರಣ ನೀನೆ |
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||ಸಕಲ||

ಋತು ವತ್ಸರವು ನೀನೆ, ಪೃಥಿವಿಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ |
ಜಿತವಾಗಿ ಎನ್ನೊಡೆಯ ಪುರಂದರವಿಟ್ಠಲನೆ 
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೆ ||ಸಕಲ||

Comments

Popular Posts