ದೇವಿ ನಮ್ಮ ದ್ಯಾವರು ಬಂದರು

 

ದೇವಿ ನಮ್ಮ ದ್ಯಾವರು ಬಂದರು

ಬನ್ನೀರೆ ನೋಡ ಬನ್ನೀರೆ

ಬನ್ನೀರೆ ನೋಡ ಬನ್ನಿರೇ || ಪ ||


ಕೆಂಗಣ್ಣ ಮೀನನಾಗಿ ನಮ್ಮ ರಂಗ

ಗುಂಗಾಡಿ ಸೋಮನ್ನ ಕೊಂದಾನ್ನ|

ಗುಂಗಾಡಿ ಸೋಮನ್ನ ಕೊಂದು ವೇದವ

ಬಂಗಾರದೊಡಲನಿಗಿತ್ತಾನ್ನ || 


ದೊಡ್ಡ ಮಡುವಿನೊಳಗೆ ನಮ್ಮ ರಂಗ

ಗುಡ್ಡವ ಹೊತ್ತುಕೊಂಡು ನಿಂತಾನ್ನ|

ಗುಡ್ಡವ ಹೊತ್ತುಕೊಂಡು ನಿಂತು

ಸುರರನ್ನು ದೊಡ್ಡವರನ್ನಾಗಿ ಮಾಡ್ಯಾನ || 


ಚೆನ್ನ ಕಾಡಿನ ಹಂದಿಯಾಗಿ ನಮ್ಮ ರಂಗ

ಚಿನ್ನದ ಕಣ್ಣನ ಕೊಂದಾನ್ನ |

ಚಿನ್ನದ ಕಣ್ಣನ ಕೊಂದು ಭೂಮಿಯ

ವನ್ನಜಸಂಭವಗಿತ್ತಾನ್ನ || ದೇವಿ ||


ಸಿಟ್ಟಿಲಿ ಸಿಂಹನಾಗಿ ನಮ್ಮರಂಗ

ಹೊಟ್ಟೆಯ ಕರುಳ ಬಗೆದಾನ್ನ |

ಹೊಟ್ಟೆಯ ಕರುಳ ಹಾರವ ಮಾಡಿ

ಪುಟ್ಟಗೆ ವರವ ಕೊಟ್ಟಾನ್ನ || 


ಹುಡುಗ ಹಾರುವನಾಗಿ ನಮ್ಮ ರಂಗ

ಬೆಡಗಿನ ಮುಗಿಲಿಗೆ ಬೆಳೆದಾನ್ನ |

ಬೆಡಗಿನ ಮುಗಿಲಿಗೆ ಬೆಳೆದು ಬಲಿಯನ್ನು

ಅಡಿಯಿಂದ ಪಾತಾಳಕೊದ್ದಾನ್ನ ||


ತಾಯ ಮಾತನು ಕೇಳಿ ಸಾಸಿರ ತೋಳಿನ

ಆವಿನ ಕಳ್ಳನ ಕೊಂದಾನ್ನ |

ಆವಿನ ಕಳ್ಳನ ಕೊಂದು

ಭೂಮಿಯ ಅವನೀಸುರರಿಗಿತ್ತಾನ್ನ || ದೇವಿ ||


ಪಿಂಗಳ ಕಣ್ಣಿನ ಕೊಂಗಗಳ ಕೂಡಿ

ಛಂಗನೆ ಲಂಕೆಗೆ ಪೋದಾನ್ನ |

ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ

ಹೆಂಗಸು ಕಳ್ಳನ ಕೊಂದಾನ್ನ || 


ಕರಿಯ ಹೊಳೆಯಲಿ ತುರುಗಳ ಕಾಯುತ್ತಾ

ಉರಗನ ಮಡುವ ಧುಮುಕ್ಯಾನ್ನ |

ಉರಗನ ಹೆಡೆ ಮೇಲೆ ಹಾರಾರಿ ಕುಣಿವಾಗ

ವರವನ್ನ ಅರ್ಯರಿಗೆ ಕೊಟ್ಟಾನ್ನ || 


ಭಂಡನಂದದಿ ಪುಂಡರಿಕಾ‌ಕ್ಷನು

ಕಂಡಕಂಡಲ್ಲಿ ತಿರುಗ್ಯಾನ |

ಕಂಡಕಂಡಲ್ಲಿ ತಿರುಗಿ ತ್ರಿಪುರರ

ಹೆಂಡಿರನ್ನೆಲ್ಲಾ ಕೆಡಿಸ್ಯಾನ || ದೇವಿ ||


ಚೆಲ್ವ ಹೆಂಡತಿಯ ಕುದುರೆಯ ಮಾಡಿ

ಒಳ್ಳೆಯ ರಾಹುತನಾದಾನ್ನ |

ಒಳ್ಳೆಯ ರಾಹುತನಾಗಿ 

ಲೇಂಛರ ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ನ || 


ಡೊಳ್ಳಿನ ಮ್ಯಾಲ್ ಕೈಯ ಬರಮಪ್ಪ ಹಾಕ್ಯಾನ

ತಾಳವ ಶಿವಪ್ಪ ತಟ್ಯಾನಾ |

ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನ

ಚೆಲುವ  ಕನಕಪ್ಪ ಕುಣಿದಾನ ||ದೇವಿ||

Comments

Popular Posts