ಕಲ್ಲುಸಕ್ಕರೆ ಕೊಳ್ಳಿರೋ
ಕಲ್ಲುಸಕ್ಕರೆ ಕೊಳ್ಳಿರೋ
ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೋ ||ಪ||
ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ ||ಅ ಪ||
ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ |
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ ||ಕಲ್ಲುಸಕ್ಕರೆ||
ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ |
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ ||ಕಲ್ಲುಸಕ್ಕರೆ||
ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ |
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಶ್ರೀ ಪುರಂದರವಿಠಲ ನಾಮವೆಂಬ ||ಕಲ್ಲುಸಕ್ಕರೆ||
Comments
Post a Comment