ಬ್ರಹ್ಮಾಂಡದೊಳಗೆ

 

ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ||ಪ||

ರಮ್ಮೆಯರಸನು ಸರ್ವದಾ ವಾಸಿಪ, ಸುಮ್ಮಾನದಿ ತಾನು ||ಅ ಪ||


ಜನನ ಮರಣವಿಲ್ಲ,  ಉಣುವ ದುಃಖವಿಲ್ಲ

ಅನುಜ ತನುಜರು ಅಲ್ಲಿಲ್ಲ,

ಅನುಮಾನದ ಸೊಲ್ಲೇ ಇಲ್ಲ ||ಬ್ರಹ್ಮಾಂಡ||


ನಿದ್ರೆಯು ಅಲ್ಲಿಲ್ಲ, ರೋಗೋ-ಪದ್ರಗಳಿಲ್ಲ

ಕ್ಷುದ್ರಜನಂಗಳು ಅಲ್ಲಿಲ್ಲ,

ಸ-ಮುದ್ರಶಯನ ಬಲ್ಲ ಎಲ್ಲ ||ಬ್ರಹ್ಮಾಂಡ||


ಸಾಧು ಜನರ ಕೂಡೆ, ಮೋಕ್ಷಕೆ ಸಾಧನೆ ಮಾಡೆ

ಮಾಧವ ಪುರಂದರವಿಟ್ಠಲರಾಯ, 

ಆದರಿಸುವನೆಲ್ಲ ಬಲ್ಲ ||ಬ್ರಹ್ಮಾಂಡ||

Comments

Popular Posts