ತಾಳ ಬೇಕು, ತಕ್ಕ ಮೇಳ ಬೇಕು
ತಾಳ ಬೇಕು, ತಕ್ಕ ಮೇಳ ಬೇಕು
ಶಾಂತ ವೇಳೆ ಬೇಕು, ಭಜನೆ ಪೇಳುವರಿಗೆ ||ಪ||
ಯತಿಪ್ರಾಸವಿರಬೇಕು, ಗತಿಗೆ ನಿಲ್ಲಿಸಬೇಕು |
ರತಿಪತಿ ಪಿತನೊಳು ಅತಿ ಪ್ರೇಮವಿರಬೇಕು ||ತಾಳ||
ಗಳ ಶುದ್ಧವಿರಬೇಕು, ತಿಳಿದು ಪೇಳಲು ಬೇಕು |
ಕಳವಳ ಬಿಡಬೇಕು, ಕಳೆ ಮುಖವಿರಬೇಕು ||ತಾಳ||
ಅರಿತವರಿರಬೇಕು, ಹರುಷ ಹೆಚ್ಚಲಿ ಬೇಕು |
ಪುರಂದರ ವಿಠಲನೆ ಪರದೈವವೆನಬೇಕು ||ತಾಳ||
Comments
Post a Comment