ಪವಮಾನ ಜಗದಾ ಪ್ರಾಣಾ
ಪವಮಾನ, ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ||ಪ||
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ, ಧರಿಪ ಮಾರುತ, ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ, ಸತತ ನಿರ್ಭೀತ, ರಾಮಚಂದ್ರನ ನಿಜದೂತ |
ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು ||ಪವಮಾನ||
ವಜ್ರ ಶರೀರ ಗಂಭೀರ, ಮುಕುಟಧರ, ದುರ್ಜನವನ ಕುಠಾರ
ನಿರ್ಜರ ಮಣಿದಯ ಪಾರ, ವಾರ ಉದಾರ, ಸಜ್ಜನರಘ ಪರಿಹಾರ |
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿಮಾರ್ಜನದಲಿ ಭವ ವರ್ಜಿತನೆನಿಸೊ ||ಪವಮಾನ||
ಪ್ರಾಣ ಅಪಾನ ವ್ಯಾನೋದಾನ ಸಮಾನ, ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ, ಜ್ಞಾನಧನ ಪಾಲಿಪ ವರೇಣ್ಯ |
ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ ಕಾಣಿಸಿ ಕೊಡುವದು ಭಾನು ಪ್ರಕಾಶ ||ಪವಮಾನ||
Comments
Post a Comment