ದೃಷ್ಟಿ ನಿನ್ನ ಪಾದದಲ್ಲಿ

 

ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಹರಿ                    

ದುಷ್ಟ ಜನ ಸಂಗವನ್ನು ಬಿಡೋ ಹಾಂಗೆ                          || ಪ ||


ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ

ಮನ ಕಟ್ಟಿಸಯ್ಯ ನಿನ್ನ ಧ್ಯಾನ ಬಿಡದ್ಹಾಂಗೆ                       || ಅ ಪ ||


ದಿಟ್ಟನಾಗಿ ಕೈಯಾನೆತ್ತಿ ಕೊಡೊ ಹಾಂಗೆ

ಕೃಷ್ಣ ನಿನ್ನ ಪೂಜೆಯನ್ನು ಮಾಡೋ ಹಾಂಗೆ |

ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ

ಬಲು ಶಿಷ್ಟ ಜನ ಸೇವೆಯನ್ನು ಮಾಡೋ ಹಾಂಗೆ                 ||ದೃಷ್ಟಿ ||


ಹುಟ್ಟಿಸಿದ ತಾಯಿತಂದೆಯಲ್ಲೋ ನೀನು 

ಒಂದು ಹೊಟ್ಟೆಗಾಗಿ ದೈನ್ಯವ ಪಡಬೇಕೇ ನಾನು |

ಪಟ್ಟೆಪಟ್ಟಾವಳಿ ಬೇಡಲಿಲ್ಲ ನಾನು

ಎನ್ನ ಗುಟ್ಟು ಅಭಿಮಾನಗಳ ಕಾಯೋ ನೀನು                      ||ದೃಷ್ಟಿ||


ನಟ್ಟ ನಡು ನೀರೊಳಗೆ ಈಸರಾಲೆ ನಾನು

ಎತ್ತಿ ಕಟ್ಟೆ ಸೇರಿಸ ಬೇಕಯ್ಯ ನೀನು |

ಬೆಟ್ಟದಂತ ಪಾಪವ  ಹೊತ್ತಿರುವೆ ನಾನು

ಅದ ಸುಟ್ಟು ಬಿಡು ಪುರಂದರ ವಿಠ್ಠಲ ನೀನು                         ||ದೃಷ್ಟಿ||

Comments

Popular Posts