ವಂದಿಸುವುದಾದಿಯಲಿ
ವಂದಿಸುವುದಾದಿಯಲಿ ಗಣನಾಥನ ||ಪ||
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||ಅ.ಪ||
ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನುಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ||ವಂದಿಸು||
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||ವಂದಿಸು||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ||ವಂದಿಸು||
Comments
Post a Comment