ಕೈಲಾಸವಾಸ ಗೌರೀಶ ಈಶಾ
ಕೈಲಾಸವಾಸ ಗೌರೀಶ ಈಶಾ || ಪ ||
ತೈಲಧಾರೆಯಂತೆ ಮನಸು ಕೊಡು ಶಂಭೋ || ಅ.ಪ ||
ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೇ |
ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯ ಕೊಡು ಶಂಭೋ || ಕೈಲಾಸ ||
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ |
ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ
ಮನಸೋ ಈ ಶಿರವ ಸಜ್ಜನ ಚರಣ ಕಮಲದಲಿ ||ಕೈಲಾಸ||
ಭಾಗೀರಥೀಧರನೇ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೋ ಸಂತತ ಶರ್ವ ದೇವಾ |
ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ ||ಕೈಲಾಸ ||
Comments
Post a Comment