ಬಾರೋ ಗುರುರಾಘವೇಂದ್ರ
ಬಾರೋ ಗುರುರಾಘವೇಂದ್ರ
ಬಾರಯ್ಯ ಬಾ ಬಾ, ಬಾರೋ ಗುರುರಾಘವೇಂದ್ರ || ಪ ||
ಹಿಂದುಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದಮುಕುಂದ ಬಂಧೋ || ಅ ಪ ||
ಸೇವಕನೆಲವೊ ನಾನು, ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು |
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ || ಬಾರೋ ||
ಕರೆದರೆ ಬರುವಿಯೆಂದು , ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು |
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನಗೆ
ಹರುಷದಲಿ ನೀನಿರುತ ಕೊಡುತಲಿ || ಬಾರೋ ||
ನರಹರಿಪ್ರಿಯನೆ ಬಾ , ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ |
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ||ಬಾರೋ||
Comments
Post a Comment