ರಾಗಿ ತಂದೀರಾ

 

 ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ.||

ಅನ್ನದಾನವ ಮಾಡುವರಾಗಿ, ಅನ್ನಛತ್ರವನಿಟ್ಟವರಾಗಿ |
ಅನ್ಯವಾರ್ತೆಯ ಬಿಟ್ಟವರಾಗಿ, ಅನುದಿನ ಭಜನೆಯ ಮಾಡುವರಾಗಿ ||ರಾಗಿ||

ಮಾತಾಪಿತರನು ಸೇವಿಪರಾಗಿ, ಪಾಪಕರ್ಮವ ಬಿಟ್ಟವರಾಗಿ |
ರೀತಿಯ ಬಾಳನು ಬಾಳುವರಾಗಿ, ನೀತಿಮಾರ್ಗದಲಿ ಖ್ಯಾತರಾಗಿ ||ರಾಗಿ||

ಕಾಮಕ್ರೋಧವ ಅಳಿದವರಾಗಿ, ನೇಮನಿತ್ಯವ ಮಾಡುವರಾಗಿ |
ರಾಮನಾಮವ ಜಪಿಸುವರಾಗಿ, ಪ್ರೇಮದಿ ಕುಣಿಕುಣಿದಾಡುವರಾಗಿ ||ರಾಗಿ||

ಸಿರಿರಮಣನ ದಿನ ನೆನೆಯುವರಾಗಿ, ಗುರುತಿಗೆ ಬಾಹೋರಂಥವರಾಗಿ |
ಕರೆದರೆ ಭವವನು ನೀಗುವರಾಗಿ, ಪುರಂದರ ವಿಠಲನ ಸೇವಿಪರಾಗಿ ||ರಾಗಿ||

Comments

Popular Posts