ತೂಗಿರೆ ರಂಗನ
ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತ ಅನಂತನ ||ಪ ||
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ ||ಅ ಪ||
ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೇ |
ನಾಗವೇಣಿಯರು ನೇಣು ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ ||ತೂಗಿರೆ||
ಇಂದ್ರ ಲೋಕದಲ್ಲಿ ಉಪೇಂದ್ರ ಮಲಗ್ಯಾನೆ
ಇಂದು ಮುಖಿಯರೆಲ್ಲ ತೂಗಿರೆ |
ಇಂದ್ರ ಕನ್ನಿಕೆಯರು ಚಂದದಿ ಬಂದು
ಮುಕುಂದನ ತೊಟ್ಟಿಲ ತೂಗಿರೆ ||ತೂಗಿರೆ||
ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲ ಕುಂತಳೆಯರು ತೂಗಿರೆ |
ವ್ಯಾಳ ಶಯನ ಹರಿ ಮಲಗು ಮಲಗು ಎಂದು
ಬಾಲ ಕೃಷ್ಣಯ್ಯನ ತೂಗಿರೆ||ತೂಗಿರೆ||
ಸಾಸಿರ ನಾಮದ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ |
ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ
ದೋಷ ವಿದೂರನ ತೂಗಿರೆ ||ತೂಗಿರೆ||
ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತರಳನ ತೊಟ್ಟಿಲ ತೂಗಿರೇ |
ಸಿರಿದೇವಿ ರಮಣನೆ ಪುರಂದರ ವಿಠಲನೆ
ಕರುಣದಿ ಮಲಗೆಂದು ತೂಗಿರೆ ||ತೂಗಿರೆ||
Comments
Post a Comment