ಜಯ ವಾಯು ಹನುಮಂತ
ಜಯ ವಾಯು ಹನುಮಂತ, ಜಯ ಭೀಮ ಬಲವಂತ
ಜಯ ಪೂರ್ಣ ಮತಿವಂತ, ಜಯ ಸಲಹೋ ಸಂತ ||ಪ||
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ |
ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ||ಜಯ||
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವನು ಕುಟ್ಟಿ |
ಉರಗ ಬಂಧದಿಂದ ಕಪಿವರ್ಯಾರು ಮೈ ಮರಿಯೆ
ಗಿರಿಯ ಸಂಜೀವನವ ತಂದು ಬದುಕಿಸಿದೆ ||ಜಯ||
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ |
ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ ||ಜಯ||
ಧುರದಲ್ಲಿ ದುರ್ಯೋಧನನ ಬಲವನು ತಿಳಿದೆ
ಅರಿತು ದುಷ್ಯಾಸನನ ಒಡಲನು ಬಗಿದೆ |
ಉರವ ತಪ್ಪಿಸಿ ಕೌರವನ ತೊಡೆಗಳ ಮುರಿದೆ
ಹರಿಯ ಕಿಂಕರ ದುರಂಧರಗಾರು ಸರಿಯೆ ||ಜಯ||
ಕಲಿಯುಗದ ಬಲು ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ |
ಕಲಿಯನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀ ಕೃಷ್ಣ ಪರನೆಂದೆ ||ಜಯ||
Comments
Post a Comment