ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ ||ಪ||
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||ಅಪ||
ನೊಂದೆನಯ್ಯ ಭವಬಂಧನದೊಳು ಸಿಲುಕಿ|
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು|
ಕಂದನಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪ ಜನಕನೆ ||ಇಂದು||
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ|
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ|
ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ಸ್ವಾಮಿ ||ಇಂದು||
ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ|
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ ||ಇಂದು||
Comments
Post a Comment