ಡಂಗುರವ ಸಾರಿ ಹರಿಯ
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ
ಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು ।।ಪ।।
ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ ।।ಡಂಗುರ।।
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಬಿಡದೆ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ ।।ಡಂಗುರ।।
ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀ ಪುರಂದರವಿಠಲ ಪರದೈವವೆಂದು ।।ಡಂಗುರ।।
Comments
Post a Comment