ಅಕ್ಕ ಕೇಳೆ ನಿನ್ನ

 

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ |

ಮುಕ್ಕಣ್ಣಗೀವರಂತೆ || ಪ ||


ಮೂರ್ಖನೊ ಗಿರಿರಾಜ ವಿಗಡ ಮುನಿ |

ಮಾತನೆ ಲೆಕ್ಕಿಸಿ ಮದುವೆ ಮಾಡಿಕೊಡುವನಂತೆ || ಅ. ಪ. ||


ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |

ತಿಲಕ ಫಣೆಗೆ ಬಾಲಚಂದ್ರನಂತೆ ||

ಹೊಳೆವ ಕಿಡಿಗಣ್ಣಂತೆ | ನಂಜು ಗೊರಳನಂತೆ |

ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ ||ಅಕ್ಕ  ||


ಉರಗ ಭೂಷಣನಂತೆ | ಭಸ್ಮ ಲೇಪನನಂತೆ |

ಕರಿಯ ಚರ್ಮಾಂಬರ ಉಡುಗೆಯಂತೆ ||

ತಿರಿದು ಉಂಬುವನಂತೆ | ಬಿಳಿಯ ಮೈಯವನಂತೆ |

ನಿರುತ ಡಮರು ಬಾರಿಸುವ ಜೋಗಿಯಂತೆ ||ಅಕ್ಕ  ||


ಹಡೆದವಳಿಲ್ಲವಂತೆ | ಎತ್ತನೇರುವನಂತೆ |

ಅಡವಿ ಗಿರಿಗಳಲಿ ಇಪ್ಪನಂತೆ ||

ಒಡನೆ ಪುಲಿದೊಗಲ ಹಾಸಿಗೆ ಇಹುದಂತೆ |

ನುಡಿಗೊಮ್ಮೆ ರಾಮನೆಂಬೋ ಸ್ಮರಣೆಯಂತೆ || ಅಕ್ಕ  ||


ಮಾರನ ರಿಪುವಂತೆ | ಐದು ಮೋರೆಗಳಂತೆ |

ಆರೂ ಇಲ್ಲದ ಪರದೇಶಿಯಂತೆ ||

ಧಾರುಣಿಯೊಳು ಗುರು ಮಹಿಪತಿಸುತಪ್ರಭೋ |

ಭವ ತಾರಕ ಶಿವನೆಂದು ಮೊರೆ ಹೋಗಬೇಕಂತೆ || ಅಕ್ಕ  ||

Comments

Popular Posts