ಸೋಜುಗಾದ ಸೂಜುಮಲ್ಲಿಗೆ
ಮಾದೇವ, ಮಾದೇವ
ಮಾದೇವ, ಮಾದೇವ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ||ಪ||
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ |
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ||ಸೋಜುಗಾದ ||
ತಪ್ಪಾಳೆ ಬೆಳಗ್ಯಿವ್ನಿ, ತುಪ್ಪಾವ ಕಾಯ್ಸಿವ್ನಿ
ಕಿತ್ತಾಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ |
ಕಿತ್ತಾಳೆ ಹಣ್ಣ ತಂದಿವ್ನಿ ಮಾದಪ್ಪ
ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮ್ಮ||ಸೋಜುಗಾದ ||
ಬೆಟ್ ಹತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ?
ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೇ |
ಬೆಟ್ಟದ್ ಮಾದೇವ ಗತಿಯೆಂದು ಅವರಿನ್ನು
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ||ಸೋಜುಗಾದ ||
ಉಚ್ಚೆಳ್ಳು ಹೂವ್ನಂಗೆ ಹೆಚ್ಚೇವೋ ನಿನ್ನ ಪರುಸೆ
ಹೆಚ್ಚಾಳಗಾರ ಮಾದಯ್ಯ, ಮಾದಯ್ಯ ನೀನೇ |
ಹೆಚ್ಚಾಳಗ್ಯಾರ ಮಾದಯ್ಯ ಏಳುಮಲೆಯ
ಹೆಚ್ಚೆವು ಕೌದಳ್ಳಿ ಕಣಿವೇಲಿ ಮಾದೇವ ನಿಮ್ಮ||ಸೋಜುಗಾದ ||
Comments
Post a Comment