ಲೋಕ ಭರಿತನೋ ರಂಗಾ
ಲೋಕ ಭರಿತನೋ ರಂಗಾ ಅನೇಕ ಚರಿತನೊ ||ಪ||
ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||
ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ
ರಾಜ ಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ ||ಲೋಕ||
ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ ||ಲೋಕ||
ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ ||ಲೋಕ||
ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನ ಕೃಷ್ಣ ||ಲೋಕ||
Comments
Post a Comment