ಹಣ್ಣು ಕೊಂಬುವ ಬನ್ನಿರಿ

 

ಹಣ್ಣು ಕೊಂಬುವ ಬನ್ನಿರಿ ಹರಿದಾಸರು 

ಹಣ್ಣು ಕೊಂಬುವ ಬನ್ನಿರಿ                                  ।।ಪ।।


ಚೆನ್ನ ಬಾಲಕೃಷ್ಣನೆಂಬ 

ಕನ್ನೆಗೊನೆಬಾಳೆಹಣ್ಣು                                     ।।ಅ.ಪ।।


ಸುತ್ತೇಳು ಲೋಕದಿ, ಸುರರು ಬಿತ್ತಿದ ಹಣ್ಣು 

ಭಕ್ತರ ಬಾಯೊಳು ನೆನೆವ ಹಣ್ಣು |

ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ

ನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು             ।।ಹಣ್ಣು।।


ಅಜನ ಪಡೆದ ಹಣ್ಣು, ಗಜವ ಕಾಯ್ದ ಹಣ್ಣು 

ನಿಜಮುನಿಗಳಿಗೆ ತೋರಿಸಿದ ಹಣ್ಣು |

ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು 

ಸುಜನಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು                     ।।ಹಣ್ಣು।।


ತುರುವ ಕಾಯ್ದ ಹಣ್ಣು, ತುರಗನ ತುಳಿದಾ ಹಣ್ಣು 

ಕರೆದರೆ ಕಂಬದೊಳು ಓಯೆಂಬ ಹಣ್ಣು |

ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು

ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು            ।।ಹಣ್ಣು।।

Comments

Popular Posts