ಕಟಿಯಲ್ಲಿ ಕರವಿಟ್ಟನು

 

ಕಟಿಯಲ್ಲಿ ಕರವಿಟ್ಟನು ಪಂಡರಿರಾಯ

ಕಟಿಯಲ್ಲಿ ಕರವಿಟ್ಟನು||ಪ||


ರಾಜಸೂಯಯಾಗದಲ್ಲಿ ರಾಜೇಶ್ವರ

ರಾಜರು ಮೊದಲಾದ ಸುರರೆಲ್ಲರು |

ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು

ರಾಜೀವಾಕ್ಷನು ಎತ್ತಿದಾಯಾಸದಿಂದಲೋ ||ಕಟಿಯಲ್ಲಿ||


ಸುರಪ ತನಯಗೆ ಸಾರಥ್ಯವನು ಮಾಡಿ

ಭರದಿಂದ ಚಕ್ರವ ಪಿಡಿದುದರಿಂದಲೂ |

ಪರಿಪರಿವಿಧದಿಂದ ಕುದುರೆಗಳನೆ ತೊಳೆದು

ಪರಿಪರಿ ಕೆಲಸದ ಆಯಾಸದಿಂದಲೊ ||ಕಟಿಯಲ್ಲಿ||


ಮಮತೆಯಿಂದಲಿ ಭಕ್ತಜನರು ನಿಮ್ಮ ಚರಣ-

ಕಮಲಯುಗವನು ಸ್ತುತಿಸುತಿರಲು |

ಮಮತೆಯಿಂದಲಿ ಅವರ ಭವವ ಕಳೆವೆನೆಂದು

ಕಮಲನಾಭ ಶ್ರೀ ಪುರಂದರವಿಠಲ ||ಕಟಿಯಲ್ಲಿ||



Comments

Popular Posts