ಊಟಕ್ಕೆ ಬಂದೆವು
ಊಟಕ್ಕೆ ಬಂದೆವು ನಾವು
ನಿಮ್ಮ ಆಟ ಪಾಟವ ಬಿಟ್ಟು ಅಡುಗೆ ಮಾಡಮ್ಮ ||ಪ||
ಕತ್ತಲಿಟ್ಟಾವಮ್ಮ ಕಣ್ಣು
ಬಾಯಿ ಬತ್ತಿ ಬರುತಲಿದೆ ಕೈಕಾಲು ಝುಮ್ಮ|
ಹೊತ್ತು ಹೋಗಿಸಬೇಡವಮ್ಮ
ಒಂದು ತುತ್ತಾದರು ಇತ್ತು ಸಲಹು ನಮ್ಮಮ್ಮ ।।ಊಟಕ್ಕೆ।।
ಒಡಲೊಳಗೆ ಉಸಿರಿಲ್ಲವಮ್ಮ
ಒಂದು ಕ್ಷಣವಾದರೆ ಜೀವ ನಿಲ್ಲುವುದಿಲ್ಲ|
ಮಡಿದರೆ ದೋಷ ತಟ್ಟುವುದು
ಒಂದು ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ।।ಊಟಕ್ಕೆ।।
ಹೊನ್ನರಾಶಿಯ ತಂದು ಸುರಿಯೆ
ಕೋಟಿ ಕನ್ನಿಕೆಯರ ತಂದು ಧಾರೆಯನೆರೆಯೆ |
ಅನ್ನದಾನಕ್ಕಿನ್ನು ಸರಿಯೆ
ಪ್ರಸನ್ನ ಪುರಂದರ ವಿಠಲ ನೀ ಹೇಳೋ ದೊರೆಯೆ ।।ಊಟಕ್ಕೆ।।
Comments
Post a Comment