ವೃಂದಾವನವೆ ಮಂದಿರವಾಗಿದೆ

 

ವೃಂದಾವನವೆ ಮಂದಿರವಾಗಿದೆ ನಿಂದಿರೆ ಶ್ರೀತುಳಸಿ ||ವ್ರಂದಾವನವೇ ||ಪ||

 

ನಂದನಂದನ ಮುಕುಂದಗೆ ಪ್ರಿಯಳಾದ ಚೆಂದದ ಶ್ರೀ ತುಳಸೀ  ||ಅ ಪ||


ತುಳಸಿಯ ವನದಲಿ ಹರಿ ಇಹನೆಂಬುದು ಶ್ರತಿಸಾರುತಿದೆ ಕೇಳಿ

ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ

ತುಳಸಿ ಸ್ಪರ್ಶನದಿಂದ ,ದೇಹ ಪಾವನವೆಂದು ನೀವೇಲ್ಲ ತಿಳಿದು ಕೇಳಿ 

ತುಳಸಿ ಸ್ಮರಣೆ ಮಾಡಿ ,ಸಕಲ ಇಷ್ಟವ ಪಡೆದು, ಸುಖದಲಿ ನೀವು ಬಾಳಿ ||ವೃಂದಾವನವೆ||


ಮೂಲ ಮ್ರತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು

ಮಾಲೆಯನ್ನು ಕೊರಳಲಿಟ್ಟ ಮುನುಜಗೆ ಮುಕುತಿಯ ಮಾರ್ಗವ ತೋರುವುದು |

ಕಾಲ ಕಾಲಗಳಲಿ ,ಮಾಡುವ ದುಷ್ಕರ್ಮ  ಕಳೆದು ಬಿಸಾಡುವುದು

ಕಾಲನ ದೂತರ ಅಟ್ಟಿ ಕೈವಲ್ಯದ  ಲೀಲೆಯ ತೋರುವುದು ||ವೃಂದಾವನವೆ||


ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ತುಳಸಿ

ಪರಮ ಭಕ್ತರ ಘೋರ ಪಾಪಗಳ ತರಿದು ಪಾವನ ಮಾಡುವ ತುಳಸಿ |

ಸಿರಿ, ಆಯು, ಪುತ್ರಾದಿ ಸಂಪದಗಳನ್ನಿತ್ತು ಹರುಷಗೊಳಿಪ ತುಳಸೀ…

ಪುರಂದರವಿಠ್ಠಲನ ಚರಣ ಕಮಲಗಳ  ಸ್ಮರಣೆ ಕೊಡುವ ತುಳಸಿ ||ವೃಂದಾವನವೆ||

Comments

Popular Posts