ನೀನೆ ದಯಾಳು
ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ |
ನಿಗಮ ಗೋಚರ ಮುಕುಂದ || ಪ ||
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು |
ಮಾನದಿಂದಲಿ ಕಾಯ್ವ ದೊರೆಗಳ ನಾ ಕಾಣೆ || ಅ.ಪ. ||
ದಾನವಾಂತಕ ದೀನ ಜನ ಮಂದಾರನೆ
ಧ್ಯಾನಿಪರ ಮನದಲ್ಲಿ ಸಂಚಾರನೆ |
ಮೌನನಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೊ ಸನಕಾದಿ ವಂದ್ಯನೆ || ನೀನೆ ||
ಬಗೆ ಬಗೆಯಲಿ ನಿನ್ನ ಸ್ತುತಿಪೆನೊ ನಗಧರ
ಖಗಪತಿ ವಾಹನನೇ |
ಮಗುವಿನ ಮಾತೆಂದು ನಗುತ ಕೇಳಿ ಬಂದು
ಬೇಗದಿಂದಲಿ ಕಾಯೊ ಸಾಗರ ಶಯನನೇ ||ನೀನೆ ||
ಮಂದರಧರ ಅರವಿಂದಲೋಚನ ನಿನ್ನ
ಕಂದನೆಂದೆನಿಸೊ ಎನ್ನ |
ಸಂದೇಹವೇಕಿನ್ನು ಸ್ವಾಮಿ ಮುಕುಂದನೇ
ಬಂದೆನ್ನ ಕಾಯೊ ಶ್ರೀ ಪುರುಂದವಿಠ್ಠಲ || ನೀನೆ ||
Comments
Post a Comment