ಲಾಲಿ ಗೋವಿಂದ ಲಾಲಿ
ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ ||ಪ||
ಲಾಲಿ ಮುನಿವಂದ್ಯ ಲಾಲಿ
ಜಾನಕಿ ರಮಣ ಶ್ರೀ ರಾಮ ಲಾಲಿ ||ಅ. ಪ||
ಆಶ್ಚರ್ಯಜನಕವಾಗಿ
ನಿರ್ಮಿಸಿದ ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು
ತೂಗಿದರು ಮತ್ಸ್ಯಾವತಾರ ಹರಿಯ ||
ಧರ್ಮಸ್ಥಾಪಕನು ಎಂದು
ನಿರವಧಿಕ ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ
ತೂಗಿದರು ಕೂರ್ಮಾವತಾರ ಹರಿಯ ||ಲಾಲಿ||
ಸರಸಿಜಾಕ್ಷಿಯರೆಲ್ಲರು
ಜನವಶೀ ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ
ತೂಗಿದರು ವರಾಹವತಾರ ಹರಿಯ ||
ಕರಿ ಕುಂಭಗಳ ಪೋಲುವ
ಕುಚದಲ್ಲಿ ಹಾರ ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ
ತೂಗಿದರು ನರಸಿಂಹಾವತಾರ ಹರಿಯ ||ಲಾಲಿ||
ಭಾಮಾಮಣಿಯರೆಲ್ಲರು
ಯದುವಂಶ ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ
ತೂಗಿದರು ವಾಮನವತಾರ ಹರಿಯ ||
ಸಾಮಜವರದನೆಂದು
ಅತುಳ ಭೃಗು ರಾಮವತಾರನೆಂದು
ಶ್ರೀಮದಾನಂದ ಹರಿಯ
ತೂಗಿದರು ಪ್ರೇಮಾತಿರೇಕದಿಂದ ||ಲಾಲಿ||
ಕಾಮನಿಗೆ ಕಾಮನೆಂದು
ಸುರಸಾರ್ವ ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ
ತೂಗಿದರು ರಾಮಾವತಾರಿಯ ಹರಿಯ ||
ಸೃಷ್ಟಿಯ ಕರ್ತನೆಂದು
ಜಗದೊಳಗೆ ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು
ತೂಗಿದರು ಕೃಷ್ಣಾವತಾರ ಹರಿಯ ||ಲಾಲಿ||
ವೃದ್ಧ ನಾರಿಯರೆಲ್ಲರು
ಜಗದೊಳು ಪ್ರಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ
ತೂಗಿದರು ಬೌದ್ಧಾವಾತಾರಿಯ ಹರಿಯ ||
ತಲತಲಾಂತರದಿಂದ
ರಂಜಿಸುವ ಮಲಯಜ ಲೇಪದಿಂದ
ಜಲಜಗಂಧಿಯರು ಪಾಡಿ
ತೂಗಿದರು ಕಲ್ಕ್ಯಾವತಾರ ಹರಿಯ ||ಲಾಲಿ||
ಆನಂದ ಸದನದೊಳಗೆ
ಗೋಪಿಯರು ಆ ನಂದಸುತನ ಕಂಡು
ಆನಂದಭರಿತರಾಗಿ
ತೂಗಿದರು ಆನಂದಭೈರವಿಯಿಂದ ||
ನೀಲಘನಲೀಲ ಜೋ ಜೋ
ಕರುಣಲ ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ
ಪರಮಾತ್ಮ ಬಾಲಗೋಪಾಲ ಜೋ ಜೋ ||ಲಾಲಿ||
ಇಂಧುಧರಮಿತ್ರ ಜೋ ಜೋ
ಶ್ರೀಕೃಷ್ಣ ಇಂಧು ರವಿನೇತ್ರ ಜೋ ಜೋ
ಇಂಧು ಕುಲಪುತ್ರ ಜೋ ಜೋ
ಪರಮಾತ್ಮ ಇಂದಿರಾರಮಣ ಜೋ ಜೋ ||
ತುಂಗ ಭವಭಂಗ ಜೋ ಜೋ
ಪರಮಾತ್ಮ ರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ
ಮೋಹನಾಂಗ ರಂಗವಿಠಲನೆ ಜೋ ಜೋ ||ಲಾಲಿ||
Comments
Post a Comment