ಕೃಷ್ಣಮೂರ್ತಿ ಕಣ್ಣ ಮುಂದೆ

 

 ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।

ಕಷ್ಟಗಳೆಲ್ಲವ ಪರಹರಿಸಿ 
ಮನದಿಷ್ಟಾರ್ಥಗಳನೆಲ್ಲಾ  ಕೊಟ್ಟು ರಕ್ಷಿಸುವಂತ ।।ಅ ಪ ।।

ಮಸ್ತಕದಲಿ ಮಾಣಿಕದ  ಕಿರೀಟ
ಕಸ್ತೂರಿ ತಿಲಕದಿಂ  ಹೊಳೆವ ಲಲಾಟ |
ಶಿಷ್ಟಿಲಿ  ಕೊಳಲನೂದುವ ಓರೆನೋಟ
ಕೌಸ್ತುಭ ಎಡಬಲದಲಿ ಓಲಾಟ ||ಕೃಷ್ಣಮೂರ್ತಿ||

ಮಗಮಘಿಸುವ  ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯು ಕೊರಳೊಳು |
ಬಗೆ ಬಗೆ ಹೊನ್ನುಂಗುರವಿಟ್ಟ  ಬೆರಳು
ಸೊಬಗಿನ ನಾಭಿಯ ತಾವರೆಯರಳು ||ಕೃಷ್ಣಮೂರ್ತಿ||

ಉಡುದಾರ ಒಡ್ಯಾನ  ನಿಕಿಲಾಭರಣ
ಉಡುಗೆ  ಪೀತಾಂಬರ ಶತರವಿ  ಕಿರಣ |
ಕಡಗ ನೂಪುರ ಗೆಜ್ಜೆಗಳನಿಟ್ಟ  ಚರಣ
ಒಡೆಯ ಪುರಂದರ ವಿಠಲನ ಕರುಣಾ ||ಕೃಷ್ಣಮೂರ್ತಿ||

Comments

Popular Posts