ನಂಬಿದೆ ನಿನ್ನ ಪಾದವ
ನಂಬಿದೆ ನಿನ್ನ ಪಾದವ, ವೆಂಕಟರಮಣ
ನಂಬಿದೆ ನಿನ್ನ ಪಾದವ ||ಪ||
ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ ||ಅಪ||
ತಂದೆಯಾಗಿ ನೀನೇ ತಾಯಿಯು ನೀನೇ
ಬಂಧುಬಳಗವು ನೀನೆ |
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ ||ನಂಬಿದೆ||
ಚಿಕ್ಕಂದು ಮೊದಲು ನಾನು
ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು |
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ||ನಂಬಿದೆ||
ಮರೆತು ಮಾಯದೊಳು
ಮುಳುಗಿದೆ ಮಾಯವರಿತು ಅರಿಯದಾದೆ |
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ ||ನಂಬಿದೆ||
Comments
Post a Comment