ರಾಮಕೃಷ್ಣರು ಮನೆಗೆ ಬಂದರು
ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೋ ।।ಪ।।
ಕಾಮಧೇನು ಬಂದಂತಾಯಿತು ವರವ ಬೇಡಿರೋ ।।ಅ.ಪ॥
ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ |
ಹಿಂಡುಪೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ।।ರಾಮಕೃಷ್ಣರು।।
ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡುಗೆ ತೊಡುತಲಿ |
ಸುಕುಮಾರ ಸುಂದರವಾದ ಉಡುಗೆ ಉಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ।।ರಾಮಕೃಷ್ಣರು।।
ಪೊಕ್ಕುಳಲಿ ಅಜನ ಪಡೆದ ದೇವದೇವನು
ಚಿಕ್ಕ ಉಂಗುಷ್ಟದಲಿ ಗಂಗೆಯ ಪಡೆದನು |
ಮಕ್ಕಳ ಮಾಣಿಕ್ಯ ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ।।ರಾಮಕೃಷ್ಣರು।।
Comments
Post a Comment