ಅಂಗಳದೊಳು ರಾಮನಾಡಿದ
ಅಂಗಳದೊಳು ರಾಮನಾಡಿದ
ಚಂದ್ರ ಬೇಕೆಂದು ತಾ ಹಠ ಮಾಡಿದ ॥ಪ॥
ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ |
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥ಅಂಗಳದೊಳು॥
ಕಂದ ಬಾ ಎಂದು ತಾಯಿ ಕರೆದಳು
ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು |
ತಾಯಿ ಕೌಸಲ್ಯ ಕಳವಳ ಗೊಂಡಳು
ಕಂದ ಅಂಜಿದನು ಎನ್ನುತಿದ್ದಳು ॥ಅಂಗಳದೊಳು॥
ಅಳುವ ಧ್ವನಿ ಕೇಳಿ ರಾಜನು
ಮಂತ್ರಿ ಸಹಿತಾಗಿ ಧಾವಿಸಿ ಬಂದನು |
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥ಅಂಗಳದೊಳು॥
ಕನ್ನಡಿಯೊಳು ಬಿಂಬ ನೋಡಿದ
ಚಂದ್ರ ಸಿಕ್ಕಿದನೆಂದು ಕುಣಿದಾಡಿದ |
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥ಅಂಗಳದೊಳು॥
Comments
Post a Comment