ಗುರುವಿನ ಗುಲಾಮ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ||ಪ||
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ||ಅ ಪ||
ಆರು ಶಾಸ್ತ್ರವನೋದಿದರೇನು
ನೂರಾರು ಪುರಾಣವ ಮುಗಿಸಿದರೇನು |
ಸಾಧು ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಬೇಡಿದರೇನು ||ಗುರುವಿನ||
ಕೊರಳೊಲು ಮಾಲೆ ಧರಿಸಿದರೇನು
ಬೆರಳೊಲು ಜಪಮಣಿ ಎಣಿಸಿದರೇನು |
ಮರಳಿ ಮರಳಿ ತಾ ಹೊರಳಿ ಬೂದಿಯೊಳು
ಮರುಳನಂತಾಗಿ ತಿರುಗಿದರೇನು ||ಗುರುವಿನ||
ನಾರಿಯ ಭೋಗ ಅಳಿಸಿದರೇನು
ಶರೀರ ಸುಖವ ಬಿಡಿಸಿದರೇನು |
ಮಾರಾಜನಕ ಶ್ರೀ ಪುರಂದರವಿಠಲನ
ಸೇರಿಕೊಂಡು ತಾ ಬೆಳೆಯುವ ತನಕ ||ಗುರುವಿನ||
Comments
Post a Comment