ಎಣೆಯಾರೊ ನಿನಗೆ ಹನುಮಂತರಾಯ

 

ಎಣೆಯಾರೊ ನಿನಗೆ ಹನುಮಂತರಾಯ ||ಪ||

ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲ 
ಪ್ರಣತಜನ ಮಂದಾರ ಪವನಸುಕುಮಾರ ||ಅ ಪ||

ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ |
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ ||ಎಣೆಯಾರೊ||

ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ |
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ||ಎಣೆಯಾರೊ||

ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ ಕಿತ್ತು |
ಖಳಖಳನೆ ನಗುತ ದಶಕಂದರನ ಗುದ್ದಿದೆ
ಭಳಿಭಳಿರೆ ಹಯವದನ ದಾಸ ನಿಸ್ಸೀಮ ||ಎಣೆಯಾರೊ||
 

Comments

Popular Posts