ರಾಜ ಬೀದಿಯೊಳಗಿಂದ
ರಾಜ ಬೀದಿಯೊಳಗಿಂದ ಕಸ್ತೂರಿ ರಂಗ
ತೇಜನೇರಿ ಮೆರೆದು ಬಂದಾ || ಪ ||
ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ
ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು
ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು
ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ್ತ ಜಾಣ || ರಾಜ ||
ತಾಳ ಶಂಖ ಭೇರಿ ತಂಬೂರಿ ಮೊದಲಾದ
ಮೇಲು ಪಂಚಾಗಗಳೆಲ್ಲ ಹೊಗಳಿ ಪಾಡಲು
ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ
ಧೂಳುಗಳನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ || ರಾಜ ||
ವೇದಘೋಷದಿಂದ ವಂದಿಸಿ ಪೊಗಳಲು
ಮೋದದಿಂದ ಗಾಯಕರು ಹಾಡಿ ಪಾಡಲು
ಹಾದಿ ಬೀದಿಯಲ್ಲಿ ನಿಂತ ಭೂಸುರಿಗೆಲ್ಲಾ
ಆದರ ಇಷ್ಟಾರ್ಥವಿತ್ತು ಮೋದದಿ ಮನ್ನಿಸುವ ಜಾಣ || ರಾಜ ||
ರಂಭೆ ಮೊದಲಾದ ಸುರರಮಣಿಯರು
ತುಂಬಿದ ಆರತಿಯ ಪಿಡಿದು ಕೂಡಿ ಪಾಡಲು
ಶಂಭು ಮುಖ ನಿರ್ಜನರೆಲ್ಲ ಸ್ವಾಮಿ ಪರಾಕೆನ್ನುತ
ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ || ರಾಜ ||
ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು
ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು
ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು
ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳ ಸವಿದು ಬೇಗ || ರಾಜ ||
ಮುತ್ತಿನ ತುರಾಯಿ ಮುಂಡಾಸದಿ
ತತ್ತಳಿಪ ತಾಳಿ ವಜ್ರ ತಾಳಿ ಚೌಕಳಿ
ಮುತ್ತಿನ ಕುಂಡಲನಿಟ್ಟು ಮೋಹಿಸುತ್ತ ಬೀದಿಯಲ್ಲಿ
ಕತ್ತಿಯ ಮುಡಿಯಲಿ ಕಟ್ಟಿ ಕೈಯಲ್ಲಿ ತೇಜಿಯ ಪಿಡಿದು || ರಾಜ ||
ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು
ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ
ಉನ್ನತ ಪಾರಾಯಣ ಉತ್ತಮರಾ ಜಶ್ವವೇರಿ
ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ || ರಾಜ ||
Comments
Post a Comment