ಬಾರೆ ಭಾಗ್ಯದ ನಿಧಿಯೇ

 

ಬಾರೆ ಭಾಗ್ಯದ ನಿಧಿಯೇ 
ಕರವೀರ ನಿವಾಸಿನಿ ಸಿರಿಯೆ ||ಪ||

ಬಾರೆ ಬಾರೆ ಕರವೀರ ನಿವಾಸಿನಿ 
ಬಾರಿಬಾರಿಗು ಶುಭ ತೋರೇ ನಮ್ಮನೆಗೆ ||ಅ.ಪ||

ನಿಗಮ ವೇದ್ಯಳೆ ನೀನು, ನಿನ್ನ ಪೊಗಳಲಾಪೆನೆ ನಾನು |
ಮಗನಪರಾಧವ ತೆಗೆದೆಣೆಸದದೆ ನೀ
ಲಗು ಬಗೆಯಿಂದಲಿ ಪನ್ನಂಗವೇಣಿ ||ಬಾರೆ||

ಲೋಕಮಾತೆಯು ನೀನು, ನಿನ್ನ ತೋಕನಲ್ಲವೆ ನಾನು |
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮನೆಗೆ  ||ಬಾರೆ||

ಕಡೆಗೆ ನಮ್ಮನೆ ವಾಸ ಒಡೆಯ ಅನಂತಾದ್ರೀಶ |
ಒಡೆಯನಿದ್ದಲ್ಲಿ ಮಡದಿ ಬರುವದು
ರೂಢಿಗುಚಿತವಿದು ನಡೆ ನಮ್ಮನೆಗೆ  ||ಬಾರೆ||

Comments

Popular Posts