ತೊರೆದು ಜೀವಿಸಬಹುದೇ

 

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ ||ಪ||

ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು |
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ತೊರೆದು ||

ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು |
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ||ತೊರೆದು ||

ಪ್ರಾಣವನ್ನು ಪರರು ಬೇಡಿದರೆ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು |
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||ತೊರೆದು|| 

Comments

Popular Posts