ಶ್ರೀಪತಿಯು ನಮಗೆ

 

ಶ್ರೀಪತಿಯು ನಮಗೆ ಸಂಪದವೀಯಲಿ
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ||ಪ||

ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಮಗೆ ಸತತ ಸಹಾಯಕನಾಗಲಿ |
ನರರೊಳುನ್ನತವಾದ ಭೋಗ ಭಾಗ್ಯಂಗಳನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ ||ಶ್ರೀಪತಿಯು||

ವಿನುತ ಸಿದ್ದಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರಿಸಲಿ |
ದಿನದಿನದಿ ಅಶ್ವಿನಿಗಳಾಪತ್ತುಗಳ ಕಳೆದು
ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ ||ಶ್ರೀಪತಿಯು||

ನಿರುತ ಸುಜ್ಞಾನವನು ಈವ ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ |
ಪುರಂದರವಿಠಲನ ಕರುಣದಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ ||ಶ್ರೀಪತಿಯು|| 

Comments

Popular Posts