ದಿಂಬದಲ್ಲಿರುವ ಜೀವ

 

ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ

ಎಂದಿಗಾದರೊಂದು ದಿನ ಸಾವು ತಪ್ಪದ್ದೊ |

ಎಂದಿಗಾದರೊಂದು ದಿನ ಸಾವು ತಪ್ಪದ್ದೊ|| ಪ||


ಹುಟ್ಟುತ್ತೇನೆ ತರಲಿಲ್ಲ ,ಸಾಯುತೇನು ಒಯ್ಯಲಿಲ್ಲ

ಸುಟ್ಟು ಸುಟ್ಟು ಸುಣ್ಣದಗಳು ಆಯಿತೀ ದೇಹ |

ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು

ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದೋ ||ದಿಂಬದಲ್ಲಿರುವ||


ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ

ಅರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡ್ವರೋ |

ಬಿಟ್ಟಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡಿ

ಸತ್ತು ಹೋದ ಮೇಲೆ ಅರ್ಥ ಯಾರಿಗಾವುದೋ ||ದಿಂಬದಲ್ಲಿರುವ||


ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದೂ ಉಣ್ಣಲಿಲ್ಲ

ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ |

ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ

ಮಣ್ಣು ಪಾಲು ಆದ ಮೇಲೆ ಯಾರಿಗಾವುದೋ ||ದಿಂಬದಲ್ಲಿರುವ||


ಬೆಳ್ಳಿ ಬಂಗಾರಿಟ್ತುಕೊಂಡು ಒಳ್ಳೇ ವಸ್ತ್ರ ಹೊದ್ದುಕೊಂಡು

ಚಳ್ಳ ಪಿಳ್ಳ ಗೊಂಬೆಯಂತೆ ಆಗಿ ಹೋದೆನೇ |

ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ

ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ ||ದಿಂಬದಲ್ಲಿರುವ||


ವಾರ್ತೆ ಕೀರ್ತಿ ಎಂಬೋ ಎರಡು ಸತ್ತ ಮೇಲೆ ಬಂದವಯ್ಯ

ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ |

ಕರ್ತೃ ಕಾಗಿನೆಲೆಯಾದಿ ಕೇಶವನ ಚರಣ ಕಮಲ

ನಿತ್ಯದಲಿ ಭಜಿಸಿ ಸುಖೀಯಾಗಿ ಬಾಳೆಲೋ ||ದಿಂಬದಲ್ಲಿರುವ||


Comments

Popular Posts