ಇದು ಭಾಗ್ಯ ಇದು ಭಾಗ್ಯ

 

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದ ಭಜನೆ ಸುಖವಯ್ಯ ||ಪ||

ಕಲ್ಲಾಗಿ ಇರಲುಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಲುಬೇಕು ಬಲ್ಲವರೊಳಗೆ |
ಮೆಲ್ಲನೇ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ ||ಇದು||

ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲು ಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ |
ಮಧ್ವ ಮತಾಬ್ಧಿಯಲಿ ಮೀನಾಗಿ ಇರಬೇಕು
ಶುದ್ಧನಾಗಿರಬೇಕು ಕರಣತ್ರಯಂಗಳಲಿ ||ಇದು|| 

ವಿಷಯಭೋಗದ ತೃಣಕೆ ಉರಿಯಾಗಿ ಇರಲುಬೇಕು
ನಿಶಿ ಹಗಲು ಶ್ರೀಹರಿಯ ನೆನೆಯಬೇಕು |
ವಸುಧೀಶ ಪುರಂದರವಿಠಲ ರಾಯನ
ಹಸನಾಗಿ ದಾಸರನು ಸೇವಿಸಲು ಬೇಕು ||ಇದು|| 

Comments

Popular Posts