ತೋಳು ತೋಳು ತೋಳು ರಂಗ
ತೋಳು ತೋಳು ತೋಳು ರಂಗ ತೋಳನ್ನಾಡೈ |
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ |
ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ ||
ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ |
ಚೆಲುವ ಮಕ್ಕಳ ಮುದ್ದು ಮಾಣಿಕ್ಯವೆ ತೋಳನ್ನಾಡೈ ||ತೋಳು||
ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ |
ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ||
ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ |
ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||ತೋಳು||
ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ |
ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ ||
ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ |
ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||ತೋಳು||
ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ |
ಅರ್ಜುನ ರಥಕೆ ಸಾರಥ್ಯ ಮಾಡಿದ ತೋಳನ್ನಾಡೈ ||
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ |
ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||ತೋಳು||
ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ |
ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ ||
ವಿಖಳಿತಗೆಡಿಸಿದ ಗೋಪಿಯರೆಲ್ಲರ ತೋಳನ್ನಾಡೈ |
ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||ತೋಳು||
Comments
Post a Comment