ಭೂಷಣಕೆ ಭೂಷಣ
ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀ ವೆಂಕಟೇಶ ||ಪ||
ನಾಲಿಗೆಗೆ ಭೂಷಣ ನಾರಾಯಣನ ನಾಮ
ಕಾಲಿಗೆ ಭೂಷಣ ಹರಿಯಾತ್ರೆಯು |
ಆಲಯಕೆ ಭೂಷಣ ತುಲಸಿ ವೃಂದಾವನ
ವಿಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು ||ಭೂಷಣ||
ದಾನವೇ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ |
ಜ್ಞಾನವೇ ಭೂಷಣ ಮುನಿಯೋಗಿವರರಿಗೆ
ಮಾನಿನಿಗೆ ಭೂಷಣ ಪತಿಭಕ್ತಿಯು ||ಭೂಷಣ||
ರಂಗನನು ನೋಡುವುದೇ ಕಂಗಳಿಗೆ ಭೂಷಣ
ಮಂಗಳಾಂಗಗೆ ಮಣಿವ ಶಿರ ಭೂಷಣ |
ಶೃಂಗಾರ ತುಲಸಿ ಮಣಿ ಕೊರಳಿಗೆ ಭೂಷಣ
ರಂಗವಿಠಲ ನಿಮ್ಮ ನಾಮ ಅತಿ ಭೂಷಣ ||ಭೂಷಣ||
Comments
Post a Comment