ತೇಲಿಸೋ ಇಲ್ಲ ಮುಳುಗಿಸೋ
ತೇಲಿಸೋ ಇಲ್ಲ ಮುಳುಗಿಸೋ
ನಿನ್ನ ಕಾಲಿಗೆ ಬಿದ್ದೆನೊ ಪರಮ ಕೃಪಾಳೋ ।।ಪ।।
ಸತಿಸುತ ಧನದಾಸೆ ಎಂತೆಂಬ ಮೋಹದಿ
ಹಿತದಿಂದ ಅತಿನೊಂದು ಬೆಂಡಾದೆನೊ |
ಗತಿಕೊಡುವರ ಕಾಣೆ ಮತಿಯ ಪಾಲಿಸೊ
ಲಕ್ಷ್ಮೀಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ।।ತೇಲಿಸೋ।।
ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ |
ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ ।।ತೇಲಿಸೋ।।
ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನೋ ಭಕ್ತಿರಸವ ಬಿಟ್ಟು |
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯೆ ।।ತೇಲಿಸೋ।।
Comments
Post a Comment