ಆಚಾರವಿಲ್ಲದ ನಾಲಿಗೆ

 

ಆಚಾರವಿಲ್ಲದ ನಾಲಿಗೆ,

ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ||ಪ||

ವಿಚಾರವಿಲ್ಲದೆ ಪರರ ದೂಶಿಪುದಕ್ಕೆ

ಚಾಚಿ ಕೊಂಡಿರುವಂತ ನಾಲಿಗೆ ||ಅ ಪ||


ಚಾಡಿ ಹೇಳಲು ಬೇಡ ನಾಲಿಗೆ

ನಿನ್ನ ಬೇಡಿ ಕೊಂಬೆನು ನಾಲಿಗೆ |

ರೂಡಿಗೊಡೆಯ ಶ್ರೀ ರಾಮನ ನಾಮವ

ಪಾಡುತಳಿರು ಕಂಡ್ಯ ನಾಲಿಗೆ ||ಆಚಾರ||


ಪ್ರಾತಃ ಕಾಲದೊಳೆದ್ದು ನಾಲಿಗೆ

ಶ್ರೀಪತಿ ಎನ್ನಬಾರದೆ ನಾಲಿಗೆ |

ಪತಿತ ಪಾವನ ನಮ್ಮ ರತಿಪತಿ ಜನಕನ

ಸತತವು ನುಡಿ ಕಂಡ್ಯ ನಾಲಿಗೆ ||ಆಚಾರ||


ಹರಿಯ ಸ್ಮರಣೆ ಮಾಡು ನಾಲಿಗೆ

ನರಹರಿಯ ಭಜಿಸು ಕಂಡ್ಯ ನಾಲಿಗೆ |

ವರದ ಪುರಂದರ ವಿಠಲ ರಾಯನ

ಚರಣ ಕಮಲ ನೆನೆ ನಾಲಿಗೆ ||ಆಚಾರ||

Comments

Popular Posts