ನರಜನ್ಮ ಬಂದಾಗ

 

ನರಜನ್ಮ ಬಂದಾಗ, ನಾಲಿಗೆ ಇರುವಾಗ, ಕೃಷ್ಣಾ ಎನಬಾರದೆ|
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ, ಕೃಷ್ಣಾ ಎನಬಾರದೆ ||ಪ||

ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಕೃಷ್ಣಾ ಎನಬಾರದೆ
ನಿತ್ಯ ಸುಳಿದಾಡುತ್ತಾ ಮನೆಯೊಳಗಾದರೂ ಕೃಷ್ಣಾ ಎನಬಾರದೆ |
ಸ್ನಾನಪಾನ ಜಪತಪಗಳ ಮಾಡುತ್ತ ಕೃಷ್ಣಾ ಎನಬಾರದೆ
ಶಾಲ್ಯಾನ್ನ ಶಡರಸ  ತಿಂದು ತೃಪ್ತರಾಗಿ ಕೃಷ್ಣಾ ಎನಬಾರದೆ ||ನರಜನ್ಮ||

ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ ಕೃಷ್ಣಾ ಎನಬಾರದೆ
ದಾರಿಯ ನಡೆವಾಗ, ಭಾರವ ಹೊರುವಾಗ, ಕೃಷ್ಣಾ ಎನಬಾರದೆ |
ಗಂಧವ ಪೂಸಿ ತಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ ||ನರಜನ್ಮ||

ಪರಿಹಾಸ್ಯದ ಮಾತನಾಡುತಾಲೊಮ್ಮೆ ಕೃಷ್ಣಾ ಎನಬಾರದೆ
ಪರಿಪರಿ ಕೆಲಸದಿ ಒಂದು ಕೆಲಸವೆಂದು ಕೃಷ್ಣಾ ಎನಬಾರದೆ|
ಕಂದನ ಬಿಗಿದಪ್ಪಿ ಮುದ್ಧಾಡುತಾಲೊಮ್ಮೆ ಕೃಷ್ಣಾ ಎನಬಾರದೆ
ಚೆಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣಾ ಎನಬಾರದೆ ||ನರಜನ್ಮ||

ನೀಗದಾಲೋಚನೆ, ರೋಗೋದ್ರಪದಲೊಮ್ಮೆ, ಕೃಷ್ಣಾ ಎನಬಾರದೆ
ಭೋಗ ಪಡಿದು ಅನುರಾಗದಿಂದಿರುವಾಗ   ಕೃಷ್ಣಾ ಎನಬಾರದೆ
ದುರಿತ ರಾಶಿಗಳ ತರಿದು ಬಿಸಾಡಲು ಕೃಷ್ಣಾ ಎನಬಾರದೆ
ಗರುಡಗಮನ ನಮ್ಮ ಪುರಂದರ ವಿಠಲನ್ನ ಕೃಷ್ಣಾ ಎನಬಾರದೆ ||ನರಜನ್ಮ|| 

 

Comments

Popular Posts