ಈ ಪರಿಯ ಸೊಬಗಾವ
ಈ ಪರಿಯ ಸೊಬಗಾವ ದೇವರಲಿ ಕಾಣೆ ।।ಪ।।
ಗೋಪೀಜನಪ್ರಿಯ ಗೋಪಾಲಗಲ್ಲದೆ ।।ಅ.ಪ।।
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು |
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿಗುರುವು ।।ಈ।।
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ |
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವಾ ಧೈರ್ಯದಿ ನೋಡೆ ಅಸುರಾಂತಕ ।।ಈ।।
ಗಗನದಲಿ ಸಂಚರಿಪ ಗರುಡದೇವನೆ ತುರುಗ
ಜಗತೀಧರ ಶೇಷ ಪರಿಯಂಕ ಶಯನ |
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ ।।ಈ।।
Comments
Post a Comment