ಬಾಗಿಲನು ತೆರೆದು
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿಯು ಕೇಳಿಸಲೊಲ್ಲದೆ ನರಹರಿಯೇ||ಪ||
ಪರಮಪದದೊಳಗೆ ವಿಷಧರನ ತಲ್ಪದಲಿ
ಸಿರಿಸಹಿತ ಕ್ಷೀರವಾರುಧಿಯೊಳಿರಲು|
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ||ಬಾಗಿಲನು||
ಕಡು ಕೋಪದಲಿ ಖಳನು ಖಡ್ಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ಕಂಬ ಬಡಿಯೇ|
ದೃಢ ಭಕ್ತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ||ಬಾಗಿಲನು||
ಯಮಸುತನ ರಾಣಿಗೆ ಅಕ್ಷಯವಸನ ಇತ್ತೆ
ಸಮಯದಲಿ ಅಜಮಿಳನ ಪೊರೆದೆ|
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ||ಬಾಗಿಲನು||
Comments
Post a Comment