ಕೂಸಿನ ಕಂಡೀರ
ಕೂಸಿನ ಕಂಡೀರ ,
ಮುಖ್ಯಪ್ರಾಣನ ಕಂಡೀರ ||
ಬಾಲನ ಕಂಡೀರ
ಬಲವಂತನ ಕಂಡೀರ ||ಪ ||
ಅಂಜನೆಯುದರದಿ ಜನಿಸಿತು ಕೂಸು
ರಾಮನ ಚರಣಕೆ ಎರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನೆ ಸುಟ್ಟಿತು ಕೂಸು ||ಕೂಸು||
ಬಂಡಿ ಅನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||ಕೂಸು||
ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನುದ್ಧರಿಸಿತು ಕೂಸು
ಮಧ್ವರಾಯರೆಂಬ ಪೆಸರಿನ ಕೂಸು
ಪುರಂದರವಿಠಲನ ಪ್ರೇಮದ ಕೂಸು ||ಕೂಸು||
Comments
Post a Comment