ದೇವ ಬಂದ ನಮ್ಮ
ದೇವ ಬಂದ ನಮ್ಮ ಸ್ವಾಮಿ ಬಂದನೋ |
ದೇವರ ದೇವ ಶಿಖಾಮಣಿ ಬಂದನೋ || ಪ ||
ದೇವರ ದೇವ ಶಿಖಾಮಣಿ ಬಂದನೋ || ಪ ||
ಉರಗಶಯನ ಬಂದ, ಗರುಡಗಮನ ಬಂದ |
ನರನಿಗೊಲಿದವ ಬಂದ , ನಾರಾಯಣ ಬಂದ ||ದೇವ ||
ಮಂದರೋದ್ಧರ ಬಂದ, ಮಾಮನೋಹರ ಬಂದ |
ವೃಂದಾವನಪತಿ ಗೋವಿಂದ ಬಂದನೋ ||ದೇವ ||
ನಕ್ರಹರನು ಬಂದ, ಚಕ್ರಧರನು ಬಂದ |
ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ ||ದೇವ ||
ಪಕ್ಷಿವಾಹನ ಬಂದ, ಲಕ್ಷ್ಮಣಾಗ್ರಜ ಬಂದ |
ಅಕ್ಷಯಫಲದಾ ಲಕ್ಷ್ಮೀರಮಣ ಬಂದನೋ ||ದೇವ ||
ನಿಗಮಗೋಚರ ಬಂದ, ನಿತ್ಯತೃಪ್ತನು ಬಂದ |
ನಗೆಮುಖ ಪುರಂದರ ವಿಠಲ ಬಂದನೋ ||ದೇವ ||
Comments
Post a Comment