ಯಾದವ ನೀ ಬಾ

 

ಯಾದವ ನೀ ಬಾ ಯದುಕುಲನಂದನ |
ಮಾಧವ ಮಧುಸೂಧನ ಬಾರೋ ||ಪಲ್ಲವಿ||

ಸೋದರ ಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ ||ಅನುಪಲ್ಲವಿ||

ಕಣಕಾಲಂದುಗೆ ಘಲುಘಲುರೆನುತಲಿ |
ಝಣಝಣ ವೇಣುನಾದದಲಿ ||
ಚಿಣಿಕೋಲು ಚೆಂಡು ಬುಗುರಿಯನಾಡುತ |
ಸಣ್ಣವರೊಳಗೂಡಿ ನೀ ಬಾರೋ||ಯಾದವ||

ಶಂಖಚಕ್ರವು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ ||
ಅಕಳಂಕ ಚರಿತನೆ  ಆದಿನಾರಾಯಣ |
ಬೇಕೆಂಬ ಭಕುತರಿಗೊಲಿಬಾರೋ ||ಯಾದವ||


ಖಗವಾಹನನೇ ಬಗೆಬಗೆ ರೂಪನೇ |
ನಗುಮೊಗದರಸನೇ ನೀ ಬಾರೋ ||
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ|
ಪುರಂದರವಿಠಲ ನೀ ಬಾರೋ ||ಯಾದವ|| 

Comments

Popular Posts