ನಮ್ಮಮ್ಮ ಶಾರದೆ
ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ||ಪ||
ಕಮ್ಮಗೋಲನವೈರಿ, ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ, ಕಣಮ್ಮ||ಅ ಪ||
ಮೋರೆ ಕಪ್ಪಿನ ಭಾವ
ಮೊರದಗಲದ ಕಿವಿ, ಕೋರೆ ದಾಡೆಯನ್ಯಾರಮ್ಮ|
ಮೂರು ಕಣ್ಣನ ಸುತ, ಮುರಿದಿಟ್ಟ ಚಂದ್ರನ
ಧೀರತಾ ಗಣನಾಥನೆ, ಕಣಮ್ಮ||ನಮ್ಮಮ್ಮ||
ಉಟ್ಟದಟ್ಟಿಯು ಪಿಡಿದುಟ್ಟ ಚಲ್ಲಣದ
ದಿಟ್ಟತಾನಿವನ್ಯಾರಮ್ಮ|
ಪಟ್ಟದ ರಾಣಿ, ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೆ, ಕಣಮ್ಮ||ನಮ್ಮಮ್ಮ||
ರಾಸಿ ವಿದ್ಯೆಯ ಬಲ್ಲ
ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ|
ಲೇಸಾಗಿ ಜನರ, ಸಲಹುವ ಕಾಗಿನೆಲೆಯಾದಿ
ಕೇಶವ ದಾಸ ಕಾಣೇ, ಅಮ್ಮಯ್ಯ||ನಮ್ಮಮ್ಮ||
Comments
Post a Comment