ಭಾಗ್ಯದ ಲಕ್ಷ್ಮೀ ಬಾರಮ್ಮ
ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ |
ಸೌಭಾಗ್ಯದ ಲಕ್ಷ್ಮೀ ಬಾರಮ್ಮ || ಪ ||
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ನಾದವ ತೋರುತ |
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ಭಾಗ್ಯ||
ಕನಕವೃಷ್ಟಿಯ ಕರೆಯುತ ಬಾರೆ
ಮನ ಕಾಮನೆಯ ಸಿದ್ಧಿಯ ತೋರೆ |
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ || ಭಾಗ್ಯ||
ಅತ್ತಿತ್ತಗಲದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ |
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ || ಭಾಗ್ಯ||
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ |
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ || ಭಾಗ್ಯ||
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ |
ಅಕ್ಕರೆವುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ ||ಭಾಗ್ಯ||
Comments
Post a Comment